Saturday, July 5, 2008

ಮುನ್ನಾರ್ ಪ್ರವಾಸ ಕಥನ

ಎಲ್ಲರೂ ಕನಸು ಕಾಣ್ತಾ ಆ ಊರಿಗೆ ಹೋಗ್ಬೇಕು ಎಂದು ಬಯಸಿ ಪ್ರವಾಸ ಹೋಗುವುದಕ್ಕೂ, ದಿಡೀರನೆ ಯಾವ ಸುಳಿವಿಲ್ಲದೇ ಪ್ರವಾಸ ಹೋಗುವುದಕ್ಕೂ ಎಷ್ಟು ವ್ಯತ್ಯಾಸವಲ್ಲವೆ? ಇದ್ದಕ್ಕಿದ್ದಂತೆ ಪ್ರವಾಸ ಹೊರಟರೆ ಎಂಥಾ ಥ್ರಿಲ್ ಎನಿಸುವುದಿಲ್ಲವೆ? ಹಾ! ನನಗಾಗಿದ್ದು ಕೂಡಾ ಹಾಗೆ. ನನಗೆ ಗೊತ್ತಾಗದ ಹಾಗೆ ಯಜ್ಞೇಶ್ ನನ್ನನ್ನು ಮುನ್ನಾರ್ ಗೆ ಕರೆದುಕೊಂಡು ಹೋಗಿದ್ದರು. ನನಗೆ ಮುನ್ನಾರಿಗೆ ಹೋಗುತ್ತೇನೆಂಬ ಕಲ್ಪನೆಯೇ ಇರಲಿಲ್ಲ. ಹಾಗೆ ಹೋದಾಗ ನನಗಾದ ಸಂತಸಕ್ಕೆ ಮಿತಿ ಇರಲಿಲ್ಲ. ಮುನ್ನಾರ್ ಹೆಸರಿಗೆ ತಕ್ಕಂತೆ ಒಂದು ಸುಂದರವಾದ ಸ್ಥಳ. ಕೇರಳದ ಒಂದು ಪ್ರಸಿದ್ಧವಾದ ಹಿಲ್ ಸ್ಟೇಶನ್. ಅಲ್ಲಿ ಎಲ್ಲಿ ನೋಡಿದರೂ ಟೀ ತೋಟದ ರಮಣೀಯ ದೃಶ್ಯಗಳೇ ಕಾಣಸಿಗುತ್ತವೆ. ನಾವು ಅಲ್ಲಿ ಹೋದಾಗ ಮಧ್ಯಾಹ್ನದ ಸಮಯ. ಆದರೂ ಮುಸ್ಸಂಜೆಯೇನೋ ಅನಿಸುತ್ತಿತ್ತು. ಏಕೆಂದರೆ ಇಡೀ ಟೀ ಬೆಟ್ಟಗಳ ಮೇಲಿಂದ ಮಂಜು ಸುರಿಯುತ್ತಿತ್ತು. ಸಣ್ಣ ಜಿಟಿ ಜಿಟಿ ಮಳೆ ಹನಿಯುತ್ತಿತ್ತು. ಆಹ್! ಅದೆಂಥಾ ಸುಂದರವಾದ ನೋಟ. "ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದ ಹಾಗಿತ್ತು". ನಂತರ ನಾವು ಹೊಟೇಲ್ಲಿಗೆ ಹೋಗಿ ದಣಿವಾರಿಸಿಕೊಂಡು ಮುನ್ನಾರಿನ ಪ್ರಸಿದ್ಧ ಸ್ಥಳಗಳ ವೀಕ್ಷಣೆಗೆಂದು ಹೊರಟೆವು.

ಆದರೆ ನಮಗೆ ನಂತರ ತಿಳಿಯಿತು ಅಲ್ಲಿ ಕಾಣಸಿಗುವ ಸ್ಥಳಗಳೆಲ್ಲಾ ಸುಂದರವೆಂದು. ನಾವು ಮೊದಲು ಹೋಗಿದ್ದು ಟಾಪ್ ಸ್ಟೇಶನ್ ಎಂಬ ಒಂದು ಸುಂದರ ತಾಣಕ್ಕೆ. ಇದು ಕೇರಳ ಮತ್ತು ತಮಿಳುನಾಡಿನ ಬಾರ್ಡರ್ನಲ್ಲಿದೆ. ಅಲ್ಲಿ ಒಂದು ಕಿ.ಮೀ ದೂರ ನಡೆದು ಹೋದರೆ ಟಾಪ್ ಸ್ಟೇಶನ್ ( ವ್ಯೂ ಪಾಯಿಂಟ್) ಸಿಗುತ್ತದೆ. ವ್ಹಾ! ಎಲ್ಲಿ ನಿಂತು ನೋಡಿದರೆ ರುದ್ರರಮಣೀಯ ದೃಶ್ಯ ನಮಗೆ ಗೋಚರಿಸುತ್ತದೆ. ಎತ್ತರವಾದ ಬೆಟ್ಟದ ತುದಿಗೆ ಮುತ್ತಿಡುತ್ತಿರುವ ಬೆಳ್ಳಿ ಮೋಡಗಳ ಸಾಲು, ವನರಾಶಿಯ ಹಸಿರಿನ ಸೊಬಗು ನಮ್ಮ ಮನಸ್ಸಿಗೆ ಕಚಗುಳಿ ಇಡುತ್ತದೆ. ನಂತರ ನಾವು ಅಲ್ಲಿಂದ ಕುಂದಲ ಡ್ಯಾಂ, ಎಕೊ ಪಾಯಿಂಟ್ ಮುಂತಾದ ಸ್ಥಳಗಳನ್ನು ವೀಕ್ಷಿಸಿ ಹೊಟೆಲ್ ಗೆ ವಾಪಸ್ಸಾದೆವು.

ಮರುದಿನ ಮುಂಜಾನೆ ಕೇರಳದ ಅತ್ಯಂತ ಎತ್ತರವಾದ ಪ್ರದೇಶ, ಅತ್ಯಂತ ಸುಂದರ ಸ್ಥಳ ರಾಜ್ ಮಲೈ ಗೆ ಭೇಟಿ ನೀಡಿದೆವು. ಇದು ದಕ್ಷಿಣ ಭಾರತದ ಅತಿ ಎತ್ತರದ ಪ್ರದೇಶ. ಇದು ನ್ಯಾಶನಲ್ ಪಾರ್ಕ್ ಕೂಡ. ಇಲ್ಲಿಗೆ ೧೫ ಕಿ ಮಿ. ಕಾರನಲ್ಲಿ ಹೋಗಿ ನಂತರ ಟಿಕೆಟ್ ಪಡೆದು ಅವರ ಬಸ್ಸಿನಲ್ಲಿ ಹೋಗಬೇಕು. ಮೇಲೆ ಹೋಗುವಾಗ ಅತ್ಯಂತ ಎಚ್ಚರಿಕೆಯಿಂದ ಹೋಗಬೇಕು. ಏಕೆಂದರೆ ಅತ್ಯಂತ ಕಿರಿದಾದ ರಸ್ತೆ, ಒಂದು ಕಡೆ ಆಳವಾದ ಪ್ರಪಾತ ಮತ್ತೊಂದು ಕಡೆ ಅತ್ಯಂತ ಎತ್ತರದ ಟೀ ಬೆಟ್ಟಗಳ ಸಾಲು. ಮೇಲೆ ಹೋದಂತೆಲ್ಲಾ ತುಂಬಾ ಭಯವೆನಿಸುತ್ತದೆ. ಚಾಲಕ ಸ್ವಲ್ಪ ನಿಯಂತ್ರಣ ತಪ್ಪಿದರೂ ಪ್ರಪಾತಕ್ಕೆ ಬಸ್ಸು ಉರುಳುವುದು ಗ್ಯಾರಂಟಿ. ಹಾಗೆ ಎಷ್ಟು ರಮಣೀಯ ನೋಟವೋ ಅಷ್ಟೇ ಭೀಕರ ಕೂಡ ಹೌದು. ನಮ್ಮ ಬಸ್ಸು ಮೆಲ್ಲನೆ ಸಾಗುತ್ತಿತ್ತು. ನಾವು ಸುಂದರ ದೃಶ್ಯಗಳನ್ನು ನೋಡುತ್ತಾ, ಹೋಗುತ್ತಿರುವಾಗ ಮಧ್ಯ ಒಂದು ಸುಂದರ ಜಲಪಾತ ನಮ್ಮನ್ನು ಕಣ್ಸೆಳೆಯುವಂತೆ ಮಾಡುತ್ತದೆ. ನಂತರ ಮೇಲೆ ಹೋದಂತೆಲ್ಲಾ ಮಂಜುಸುರಿಯುವುದು ಹೆಚ್ಚುತ್ತಾ ಹೋಗುತ್ತದೆ. ಆ ದೃಶ್ಯವನ್ನು ನೋಡಲು ಬಲು ಸೊಗಸು. ಎರಡು ಕಣ್ಣು ಸಾಲುವುದಿಲ್ಲ ಎನಿಸುತ್ತದೆ. ನಂತರ ೨ ಕಿ ಮೀ ನಡೆದು ಹೋಗಬೇಕು. ಆಗ ಮಂಜು ಸುರಿಯುವ ಪ್ರಮಾಣ ಇನ್ನೂ ಹೆಚ್ಚಿ, ತಂಪಾದ ಹಾಗು ಚಳಿಯಾದ ವತಾವರಣ ಸೃಷ್ಟಿಯಾಗುತ್ತದೆ. ನಿಸರ್ಗದ ಸುಂದರ ದೃಶ್ಯಗಳು ಕಾಣುತ್ತದೆ. ಇದನ್ನೆಲ್ಲಾ ವೀಕ್ಷಿಸಿ ನಮ್ಮ ಪಯಣ ಸಾಗಿದ್ದು Tea Factory ಯತ್ತ. ಅಲ್ಲಿ ಟೀ ಎಲೆಗಳಿಂದ ಹೇಗೆ ಟೀ ಪೌಡರ್ ತಯಾರಿಸುತ್ತಾರೆ ಎಂಬ ವಿವರಣೆ ಸಿಗುತ್ತದೆ. ಸ್ವತಹ: ನಾವೇ ಟೀ ಪೌಡರ್ ತಯಾರಾಗುವ ರೀತಿ ನೋಡಬಹುದು. ನಂತರ ಇಂನ್ನೊದು ವ್ಯೂ ಪಾಯಿಂಟ್ ನೋಡಿ ಹೊಟೆಲ್ ಗೆ ವಾಪಸ್ಸಾದೆವು.

ದೇಹಕ್ಕೆ ದಣಿವಾಗಿದ್ದರೂ, ನಮ್ಮ ಮನಸ್ಸೆಲ್ಲಾ ಸಂತಸದಿಂದ ಕುಣಿಯುತ್ತಿತ್ತು. ಆಗ ನನಗೆ ಸಿನಿಮಾದ ಒಂದು ಹಾಡಿನ ಸಾಲು ನೆನಪಾಯಿತು. "ಈ ದಿನ ಖುಶಿಯಾಗಿದೆ.... ನನಗೇಕೆ ಹೀಗಾಗಿದೆ?". ಅದನ್ನು ಮನಸ್ಸಿನಲ್ಲೇ ಗುನುಗಿ ಸಂತಸದಿಂದ ಬೆಂಗಳೂರಿಗೆ ವಾಪಸ್ಸಾದೆವು.

4 comments:

ಜಗದೀಶಶರ್ಮಾ said...

ಅನುಭವ ಅನುಭವಿಸಿದಂತೆಯೇ ಮೂಡಿದೆ.

Shree said...

ಧನ್ಯವಾದ ಜಗದೀಶಣ್ಣ

Anonymous said...

sakkattagide beedi sir........... i love munnar..............

harsha said...

I too want to watch it soon